ಪ್ಲಾಸಿ ಕದನ

 	ಬಂಗಾಳದ ನವಾಬ ಸಿರಾಜ್-ಉದ್-ದೌಲನ ಸೈನ್ಯಕ್ಕೂ ರಾಬರ್ಟ್ ಕ್ಲೈವನ ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯಕ್ಕೂ 1757ರಲ್ಲಿ ನಡೆದ ಕದನ. ಕ್ರಿ.ಶ.1756ರಲ್ಲಿ ಆಲಿವರ್ದಿ ಖಾನ್ ಮರಣ ಹೊಂದಲು, ಸಿರಾಜ್-ಉದ್-ದೌಲ ಬಂಗಾಳದ ನವಾಬನಾದ. ಸಿರಾಜನ ಉತ್ತರಾಧಿಕಾರವನ್ನು ವಿರೋಧಿಸಿದ ಗುಂಪಿನೊಂದಿಗೆ ಬ್ರಿಟಿಷರು ಸ್ನೇಹ ಬೆಳೆಸಿದ್ದರಿಂದ ಅವನ ಅಸಮಾಧಾನಗೊಂಡ. ಅಲ್ಲದೆ ಅವನು ಕಣ್ಣಿಟ್ಟಿದ್ದ ಹಿಂದು ವರ್ತಕನೊಬ್ಬನಿಗೆ ಬ್ರಿಟಿಷರು ಆಶ್ರಯ ನೀಡಿದ್ದರು. ಬ್ರಿಟಿಷರೂ, ಫ್ರೆಂಚರೂ ತಮ್ಮ ಸ್ವಾಸ್ಥ್ಯಗಳ ಸುತ್ತಲೂ ಕೋಟೆಕೊತ್ತಳಗಳನ್ನು ನಿರ್ಮಿಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕೆಂದು ಅವನು ತಿಳಿಸಿದ. ಫ್ರೆಂಚರು ಅವನೊಂದಿಗೆ ಸಂಧಿ ಏರ್ಪಡಿಸಿಕೊಂಡರು. ಆದರೆ ಬ್ರಿಟಿಷರು ಅವನ ಸೂಚನೆಯನ್ನು ತಿರಸ್ಕರಿಸಿದರು. ಕೂಡಲೇ ಅವನ ಬ್ರಿಟಿಷರಿಗೆ ಸೇರಿದ ಕಾಸಿಮ್ ಬಜಾರ್ ಕೋಠಿಯನ್ನು ವಶಪಡಿಸಿಕೊಂಡ. ಸೇನಾ ಸಮೇತನಾಗಿ ಕಲ್ಕತ್ತದತ್ತ ಮುನ್ನಡೆದ. ಈ ಅನಿರೀಕ್ಷಿತ ಆಕ್ರಮಣದಿಂದ ಕಂಗೆಟ್ಟ ಬ್ರಿಟಿಷರು ವಿಲಿಯಮ್ ಕೋಟೆಗೆ ಪಲಾಯನ ಮಾಡಿದರು. ಕೆಲವೇ ದಿನಗಳಲ್ಲಿ ಬ್ರಿಟಿಷರ ಎಲ್ಲ ಕೋಠಿಗಳೂ ಇತರ ನೆಲೆಗಳೂ ನವಾಬನ ವಶವಾದವು. ಮದರಾಸಿನಲ್ಲಿದ್ದ ಇಂಗ್ಲಿಷ್ ಕಂಪನಿ ಸರ್ಕಾರ ಸಿರಾಜನ ವಿರುದ್ಧ ಸೈನಿಕ ಕಾರ್ಯಾಚರಣೆಯನ್ನು ಕೈಗೊಳ್ಳಲು ರಾಬರ್ಟ್ ಕ್ಲೈವನ್ನು ನೇಮಿಸಿತು. 1757ರ ಜನವರಿಯಲ್ಲಿ ಕ್ಲೈವ್ ಕಲ್ಕತ್ತವನ್ನೂ ಹೂಗ್ಲಿಯನ್ನೂ ಮರಳಿ ಪಡೆದ. ಏರ್ಪಟ್ಟ ಒಪ್ಪಂದವೊಂದರಂತೆ ಬ್ರಿಟಿಷರು ಬಂಗಾಳದಲ್ಲಿ ತಮ್ಮ ಮೊದಲಿನ ಸ್ಥಾನವನ್ನು ಪಡೆದರು. ನವಾಬ ಯುದ್ಧ ಪರಿಹಾರವನ್ನು ನೀಡಬೇಕಾಯಿತು. ಅಲ್ಲದೆ ಬ್ರಿಟಿಷರು ಕಲ್ಕತ್ತದ ಸುತ್ತಲೂ ಕೋಟೆಯನ್ನು ಕಟ್ಟಲೂ ತಮ್ಮವೇ ಆದ ನಾಣ್ಯಗಳನ್ನು ಟಂಕಿಸಲೂ, ಅವರು ಫುಲ್ಟಾ ನಗರದಲ್ಲಿ ನೆಲೆಸಲೂ ಅನುಮತಿ ನೀಡಿದ. ಈ ಮಧ್ಯೆ ನವಾಬ ಫ್ರೆಂಚರ ಬಗ್ಗೆ ಅನುಕಂಪವನ್ನೂ ಫ್ರೆಂಚ್ ಸೇನಾನಿ ಬುಸ್ಸಿಯೊಂದಿಗೆ ಸ್ನೇಹ ಸಂಪರ್ಕವನ್ನೂ ಹೊಂದಿರುವನೆಂಬುದನ್ನು ತಿಳಿದ ಕ್ಲೈವ್ ಮತ್ತು ನೌಕಾಧಿಪತಿ ವಾಟ್‍ಸನ್ ಫ್ರೆಂಚ್ ನೆಲೆ ಚಂದ್ರನಗರದ ಮೇಲೆ ದಾಳಿ ಮಾಡಿದರು. ಹಿಂದಿನ ಒಪ್ಪಂದದಂತೆ ನವಾಬ ಬ್ರಿಟಿಷರ ಸ್ನೇಹಿತನಾದುದರಿಂದ ಮಧ್ಯ ಪ್ರವೇಶಿಸುವಂತಿರಲಿಲ್ಲ. ಇಂಗ್ಲಿಷರು ಅದನ್ನೇ ಚಂದ್ರನಾಗೂರ್ ಆಕ್ರಮಣಕ್ಕೆ ನವಾಬನ ಒಪ್ಪಿಗೆ ಎಂದು ಬಗೆದರು.

	ಅಷ್ಟರಲ್ಲಿ ಸಿರಾಜನ ಸೇನಾನಿ ಮೀರ್ ಜಾಫರನ ನೇತೃತ್ವದಲ್ಲಿ ನವಾಬನ ಪದಚ್ಯುತಿಗಾಗಿ ಮುರ್ಷಿದಾಬಾದಿನಲ್ಲಿ ಒಳಸಂಚೊಂದು ನಡೆಯುತ್ತಿತ್ತು. ಸಿರಾಜ್ ಇಂಗ್ಲಿಷರ ಮಿತ್ರನಾಗಿದ್ದರೂ ಕ್ಲೈವ್ ಒಳಸಂಚಿಗೆ ಬೆಂಬಲ ನೀಡಿದ. ಮುರ್ಷಿದಾಬಾದಿನಲ್ಲಿ ಬ್ರಿಟಿಷ್ ಸರ್ಕಾರದ ಪ್ರತಿನಿಧಿಯಾಗಿದ್ದ ವಾಟ್ಸ್ ಮತ್ತು ಮೀರ್‍ಜಾಫರ್ ಇವರ ನಡುವೆ ರಹಸ್ಯ ಒಪ್ಪಂದವೇರ್ಪಟ್ಟಿತು. ಕ್ಲೈವ್ ಮತ್ತು ನವಾಬನ ನಡುವೆ ಕದನ ಆರಂಭವಾದರೆ ಮೀರ್ ಜಾಫರ್ ತನ್ನ ಅನುಯಾಯಿಗಳೊಂದಿಗೆ ತಟಸ್ಥನಾಗಿರಬೇಕೆಂಬುದಾಗಿ ಒಡಂಬಡಿಕೆಯಾಯಿತು. ಬ್ರಿಟಿಷ್‍ಸೇನಾ ಮತ್ತು ನೌಕಾಪಡೆಗಳ ಬಲಸಂವರ್ಧನೆಗಾಗಿ ಅಪಾರವಾಗಿ ಹಣವನ್ನು ಒದಗಿಸಲು ಮೀರ್ ಜಾಫರ್ ಒಪ್ಪಿದ.

	ನಿರಾಶ್ರಿತರಾದ ಫ್ರೆಂಚರಿಗೆ ಸಿರಾಜ್-ಉದ್-ದೌಲ ರಕ್ಷಣೆ ನೀಡಿದ್ದೇ ನೆವವಾಗಿ ಇಂಗ್ಲಿಷರು ಸಿರಾಜ್-ಉದ್-ದೌಲನ ವಿರುದ್ಧ ಯುದ್ಧ ಹೂಡಿದರು. ಇಂಗ್ಲಿಷರೊಡನೆ ಮೀರ್ ಜಾಫರನೂ ಇತರರೂ ಹೂಡಿದ್ದ ಸಂಚು ನವಾಬನಿಗೆ ಗೊತ್ತಾಗಲಿಲ್ಲ. ನವಾಬ ಪ್ಲಾಸಿ ಎಂಬಲ್ಲಿ ಕ್ಲೈವ್ ತನ್ನ ಸೈನ್ಯವನ್ನು ಜಮಾಯಿಸಿದ. ಪ್ಲಾಸಿಗೆ 24 ಕಿ.ಮೀ. ದೂರದ ಕಾಟ್ವಾ ಎಂಬಲ್ಲಿ ಕ್ಲೈವ್ ತನ್ನ ಸೇನೆಯನ್ನು ಜಮಾಯಿಸಿದ. 1757ರ ಜೂನ್ 22 ರಂದು ರಾತ್ರಿ ಕ್ಲೈವ್ ಭಾಗೀರಥಿ ನದಿಯನ್ನು ದಾಟಿ ಪ್ಲಾಸಿಯನ್ನು ತಲುಪಿದ. 23ರಂದು ಬೆಳಗ್ಗೆ ಕದನ ಆರಂಭವಾಯಿತು. ನವಾಬನ ಕಡೆ ಮೀರ್‍ಜಾಫರ್ ಮತ್ತು ರಾಮ್ ದುರ್ಲಭರ ನೇತೃತ್ವದಲ್ಲಿದ್ದ ಸೈನ್ಯಗಳು ಯುದ್ಧ ಮಾಡದೆ ತೆಪ್ಪಗಿದ್ದವು. ಮೀರ್ ಜಾಫರ್ ನವಾಬನಲ್ಲಿ ನಿಷ್ಠೆಯಿಂದ ಪ್ರತಿಭಟನೆ ಸಲ್ಲಿಸಿದ್ದರೆ ಇಂಗ್ಲಿಷ್ ಸೇನೆಯನ್ನು ನಿರ್ಮೂಲಗೊಳಿಸಬಹುದಾಗಿತ್ತು. ಫ್ರೆಂಚರ ಬೆಂಬಲವಿದ್ದ ಮೋಹನಲಾಲ್ ಮತ್ತು ಮೀರ್ ಮದನರ ಸಣ್ಣ ಪಡೆಗಳು ಮಾತ್ರ ಹೋರಾಟ ನಡೆಸಿದುವು-ಗುಂಡೊಂದಕ್ಕೆ ಮೀರ್‍ಮದನ್ ಬಲಿಯಾದ. ನವಾಬ ಹತವೀರ್ಯನಾದ. ಮೀರ್ ಜಾಫರನ ಸಲಹೆಯಂತೆ ಸೈನ್ಯವನ್ನು ಹಿಂದಕ್ಕೆ ಬರಲು ಸೂಚನೆ ನೀಡಿದ. ಮುನ್ನುಗ್ಗಿ ಹೋರಾಡುತ್ತಿದ್ದ ಮೋಹನ್ ಲಾಲನಿಗೆ ಯುದ್ಧ ತ್ಯಜಿಸುವಂತೆ ನವಾಬನ ಆಜ್ಞೆ ತಲಪಿತು. ವಿಧಿಯಿಲ್ಲದೆ ಮೋಹನ್‍ಲಾಲ್ ಹಿನ್ನಡೆದ.

	24ರಂದು ಬೆಳಗ್ಗೆ ಸಿರಾಜ್-ಉದ್-ದೌಲ ಮುರ್ಷಿದಾಬಾದನ್ನು ತಲುಪಿದ. ಸೋಲಿನ ಸುದ್ದಿ ಎಲ್ಲೆಲ್ಲೂ ಹಬ್ಬಿತ್ತು. ಸೈನಿಕರು ಗಾಬರಿಯಿಂದ ಚದುರಿ ಹೋಗಿದ್ದರು. ಹಣದ ಪ್ರಲೋಭನಕ್ಕೂ ಅವರು ಒಪ್ಪಲಿಲ್ಲ. ಕೊನೆಗೆ ಸಿರಾಜ್-ಉದ್-ದೌಲ ತನ್ನ ಹೆಂಡತಿಯೊಡನೆ ಪಲಾಯನ ಮಾಡಿದ. ಮೀರ್ ಜಾಫರ್ 25ರಂದು ಮುರ್ಷಿದಾಬಾದಿಗೆ ಬಂದ. ಕೆಲವು ದಿನಗಳ ಅನಂತರ ಕ್ಲೈವ್ ಆಗಮಿಸಿದ. ಇಂಗ್ಲಿಷರು ಮೀರ್ ಜಾಫರ್ ಬಂಗಾಲದ ಸುಬಾದಾರನೆಂದು ಘೋಷಿಸಿದರು. ಸಿರಾಜ್-ಉದ್-ದೌಲ ಸೆರಸಿಕ್ಕ. ಮೀರ್ ಜಾಫರನ ಮಗ ಮೀರಾನನ ಆಜ್ಞೆಯಂತೆ ಅವನನ್ನು ಕೊಲೆ ಮಾಡಲಾಯಿತು. ಕ್ಲೈವನೂ ಅವನ ಸಹೋದ್ಯೋಗಿಗಳೂ ಮೀರ್ ಜಾಫರ್‍ನಿಂದ ಯಥೇಚ್ಛ ಬಹುಮಾನ ಪಡೆದರು. ಕಂಪನಿಗೂ ಅಗಾಧ ಹಣವೂ ಇಪ್ಪತ್ನಾಲ್ಕು ಪರಗಣಗಳ ಪ್ರದೇಶವೂ ಬಂದುವು.

	ಪ್ಲಾಸಿ ಕದನ ಬಲು ದೊಡ್ಡದೇನೂ ಅಲ್ಲ. ಆದರೆ ಅದರ ಪರಿಣಾಮ ತೀವ್ರವಾದ್ದಾಯಿತು. ಬಂಗಾಲವನ್ನೂ ಕ್ರಮೇಣ ಇಡೀ ಭಾರತವನ್ನೂ ಬ್ರಿಟಿಷರು ಗೆಲ್ಲಲು ಇದು ಹಾದಿ ಮಾಡಿಕೊಟ್ಟಿತು. 
    (ಸಿ.ಬಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ